ನಾವು ಪ್ರತಿ ವರ್ಷ ಮಾರ್ಚ್ 24 ರ ದಿನವನ್ನ ವಿಶ್ವ ಕ್ಷಯರೋಗ ದಿನ(Tuberculosis day) ಅಂತ ಆಚರಣೆ ಮಾಡುತ್ತೇವೆ. ಯಾಕೆಂದರೆ ಕ್ಷಯರೋಗ ಎಂಬ ಗಂಭೀರ ಕಾಯಿಲೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತೆ ಅದರ ನಿರ್ಮೂಲನೆ ಮಾಡುವುದು ಈ ದಿನದ ಉದ್ದೇಶವಾಗಿದೆ.
Table of Contents
Toggleಏನಿದು ಕ್ಷಯರೋಗ ?(Tuberculosis)
ಕ್ಷಯರೋಗ ಇದೊಂದು ಮೈಕೋಬ್ಯಾಕ್ಟೀರಿಯಂ ಎಂಬ ಬ್ಯಾಕ್ಟೀರಿಯಾದಿಂದ ಬರುವ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಕೆಮ್ಮಿದಾಗ ಸೀನಿದಾಗ, ಗಾಳಿಯಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುತ್ತದೆ. ಸಾಮಾನ್ಯವಾಗಿ ನಮ್ಮ ಶ್ವಾಸಕೋಶಗಳನ್ನ ಹಾನಿಮಾಡುತ್ತದೆ. ಆದರೆ ನಾವು ನಿರ್ಲಕ್ಷ್ಯ ಮಾಡಿದರೆ ಕೆಲವೊಮ್ಮೆ ನಮ್ಮ ದೇಹದ ಬೇರೆ ಭಾಗಗಳನ್ನೂ ತೊಂದರೆ ಮಾಡುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯ(WHO) ವರದಿ :
2024-25 ರ WHO ವರದಿಯ ಪ್ರಕಾರ 2024 ರಲ್ಲಿ ಪ್ರಪಂಚದಾದ್ಯಂತ ಸುಮಾರು 1 ಕೋಟಿ ಗೂ ಅಧಿಕ ಜನ ಈ ಕ್ಷಯ ರೋಗದಿಂದ ನರಳುತ್ತಿದ್ದಾರೆ. ಪ್ರತೀ ವರ್ಷ ಈ Tuberculosis ಕಾಯಿಲೆಯಿಂದ ಸುಮಾರು10 ರಿಂದ 13 ಲಕ್ಷ ಜನ ಸಾಯುತ್ತಿದ್ದಾರೆ. ಪ್ರಪಂಚದ ಜನಸಂಖ್ಯೆಯಲ್ಲಿ ಕಾಲು ಬಾಗದಷ್ಟು ಜನಕ್ಕೆ ಈ ಕಾಯಿಲೆ ಹರಡುವ ಎಲ್ಲ ಸಾಧ್ಯತೆಯೂ ಇದೆ. ಇದು ಇಲ್ಲಿಯವರೆಗೂ ಅತೀ ಅಪಾಯಕಾರಿ ಸಾಂಕ್ರಾಮಿಕ ರೋಗವಾಗಿ ಉಳಿದುಕೊಂಡಿದೆ.
ಮಕ್ಕಳು ಮತ್ತು ವಯಸ್ಕರಿಗೆ ಸೋಂಕು ತಗುಲಿದರೆ ಈ ರೋಗ ಹೆಚ್ಚಾಗುವ ಲಕ್ಷಣಗಳು ಜಾಸ್ತಿ ಇರುತ್ತದೆ.
ಇದರಲ್ಲಿ ನಮಗೆ ನೆಮ್ಮದಿಯ ವಿಚಾರ ಏನೆಂದರೆ, ಈ ಕಾಯಿಲೆಯನ್ನು ತಡೆಯಬಹುದು ಮತ್ತು ಗುಣಪಡಿಸಬಹುದು.
ಕ್ಷಯರೋಗಕ್ಕೆ ಪ್ರಮುಖ ಕಾರಣಗಳನ್ನ ನೋಡೋಣ.
- Tuberculosis ಸೋಂಕಿತ ವ್ಯಕ್ತಿಯ ಜೊತೆ ನಿರಂತರ ಸಂಪರ್ಕ
- ದೇಹದಲ್ಲಿ ದುರ್ಬಲವಾದ ರೋಗನಿರೋಧಕಶಕ್ತಿ (Weak immunity)
- ದೇಹದಲ್ಲಿ ಪೋಷಕಾಂಶಗಳ ಕೊರತೆ.
- ಸುತ್ತಮುತ್ತಲಿನ ಪರಿಸರ ಗಲೀಜಿನಿಂದ ತುಂಬಿರುವುದು ಮತ್ತು ಕೊಳಚೆ ಪ್ರದೇಶದಲ್ಲಿ ವಾಸಿಸುವುದು.
- ಧೂಮಪಾನ ಮತ್ತೆ ಮಧ್ಯಪಾನ ಜಾಸ್ತಿ ಮಾಡುತ್ತಿರುವುದು.
- ಮಧುಮೇಹ(Diabetes) ಮತ್ತೆ HIV ಕಾಯಿಲೆ ಇರುವವರಿಗೆ ಈ ರೋಗ ಬೇಗ ಹರಡುತ್ತದೆ.
ಕ್ಷಯ ರೋಗದ ಲಕ್ಷಣಗಳು(Symptoms of Tuberculosis)ಯಾವ ರೀತಿ ಇರುತ್ತವೆ?
- ಒಂದು ವಾರಕ್ಕಿಂತ ಹೆಚ್ಚು ಕೆಮ್ಮು, ಬಿಡದೆ ಕೆಮ್ಮುತ್ತಿರುವುದು.
- ಕಫದಲ್ಲಿ ಆಗಾಗ ರಕ್ತ ಬರುವುದು.
- ಎದೆಯಲ್ಲಿ ಅತಿಯಾದ ನೋವು ಕಾಣಿಸುವುದು.
- ಅತಿಯಾದ ಜ್ವರ ಮತ್ತೆ ಬೆವರುವುದು.
- ಸುಸ್ತಾಗುವುದು, ತುಂಬಾ ಆಯಾಸದ ಅನುಭವ.
- ತೂಕ ನಿರಂತರವಾಗಿ ಕಡಿಮೆ ಆಗುವುದು.
ಕ್ಷಯ ರೋಗ ಯಾವ ರೀತಿ ಹರಡುತ್ತದೆ?
Tuberculosis ಇದು ಮುಖ್ಯವಾಗಿ ಗಾಳಿಯಲ್ಲಿ ಹರಡುವ ಸೋಂಕು ಆಗಿದ್ದು,
- ಈಗಾಗಲೇ ಈ ರೋಗಕ್ಕೆ ತುತ್ತಾಗಿರುವ ವ್ಯಕ್ತಿ ಕೆಮ್ಮಿದಾಗ ಅದರಿಂದ ಹೊರಬರುವ ಕಣಗಳಿಂದ ಸುಲಭವಾಗಿ ಬೇರೆಯವರಿಗೆ ಹರಡುತ್ತದೆ.
- ಆಸ್ಪತ್ರೆಗಳು, ಅಥವಾ ಕಡಿಮೆ ಗಾಳಿ ಬೀಸುವ ಕೊಠಡಿಗಳಲ್ಲಿ ವಾಸ ಮಾಡುವ ಜನರಿಗೆ ಬೇಗ ಹರಡುತ್ತದೆ.
- ಕಾಯಿಲೆಗೆ ತುತ್ತಾಗಿರುವ ವ್ಯೆಕ್ತಿಯ ಹತ್ತಿರ ಸಮಯ ಕಳೆಯುವುದರಿಂದ ಹರಡುವ ಸಾಧ್ಯತೆ ಜಾಸ್ತಿ.
Tuberculosis ಪರೀಕ್ಷೆಯ ಹಲವು ವಿಧಾನಗಳು :
ಈ ಕ್ಷಯ ರೋಗವನ್ನು ಪತ್ತೆಹಚ್ಚಲು ಕೆಲವು ಪರೀಕ್ಷೆಗಳಿವೆ ಅವುಗಳೆಂದರೆ,
1) ಕಫ ಪರೀಕ್ಷೆ ಮಾಡಿಸುವುದು(Sputum test).
2) xray ಟೆಸ್ಟ್ .
3) ರಕ್ತ ಪರೀಕ್ಷೆ ಮಾಡಿಸುವುದು.
4) Mantoux test : ಇದು ಕೈ ಮೇಲೆ ಇಂಜಕ್ಷನ್ ನಿಂದ ಸಣ್ಣ ಗುಳ್ಳೆಯ ರೀತಿ ಮಾಡಿ ಅದರಿಂದ ಕ್ಷಯರೋಗ ಪರೀಕ್ಷೆ ಮಾಡಲಾಗುತ್ತದೆ.
ಈ ಎಲ್ಲಾ ಪರೀಕ್ಷೆಗಳನ್ನ ವೈದ್ಯರ ಸಲಹೆಯಂತೆ ಮಾಡಿಸಬೇಕಾಗುತ್ತದೆ.
ಕ್ಷಯರೋಗಕ್ಕೆ ಚಿಕಿತ್ಸೆ ಯಾವುದು?
TB ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಆದರೆ ವೈದ್ಯರು ಹೇಳಿದ ಔಷಧಿಗಳನ್ನು ಸರಿಯಾಗಿ ತಿನ್ನುವುದರಿಂದ ಮಾತ್ರ.
- ಕನಿಷ್ಠ 6 ತಿಂಗಳ ಕಾಲ Tuberculosis ರೋಗದ ಔಷಧಿ ಸೇವನೆ ಕಡ್ಡಾಯ.
- DOTS( Directly Observed Treatment Shortcourse) ಇದೊಂದು ಕ್ಷಯರೋಗ ನಿರ್ಮೂಲನೆಯ ಗುಣಮಟ್ಟದ ವಿಧಾನವಾಗಿದೆ.
- ಔಷಧಿಯನ್ನು ಮಧ್ಯದಲ್ಲಿ ನಿಲ್ಲಿಸದ ಹಾಗೆ ತೆಗೆದುಕೊಳ್ಳುವುದರಿಂದ ಕಾಯಿಲೆ ವಾಸಿಯಾಗುತ್ತದೆ.
ನೈಸರ್ಗಿಕ ವಿಧಾನದಿಂದ ಕ್ಷಯರೋಗಕ್ಕೆ ಚಿಕಿತ್ಸೆ :
ವೈದ್ಯಕೀಯ ಚಿಕಿತ್ಸೆಯ ಜೊತೆಗೆ ನೈಸರ್ಗಿಕ ಚಿಕೆತ್ಸೆ ಕ್ಷಯ ರೋಗಕ್ಕೆ ರಾಮಭಾಣವಾಗಿ ಕೆಲಸ ಮಾಡುತ್ತದೆ.
- ಪೌಷ್ಠಿಕ ಆಹಾರ ಸೇವನೆ( ಹಾಲು, ಮೊಟ್ಟೆ, ತರಕಾರಿಗಳು, ಹಣ್ಣುಗಳು, ಸೊಪ್ಪು)
- ಹಾಲಿನಲ್ಲಿ ಹರಿಶಿನ , ಶುಂಠಿ ಬಳಕೆ.
- ದಿನಕ್ಕೊಂದು ತುಳಸಿ ಎಲೆ ತಿನ್ನುವುದು.
- ಕೆಲ್ಸದ ಜೊತೆಗೆ ಸಾಕಷ್ಟು ವಿಶ್ರಾಂತಿ ಮಾಡುವುದು ಮುಖ್ಯ.
- ಶುದ್ಧವಾದ ಗಾಳಿ, ಮತ್ತು ಬೆಳಗಿನ ಸೂರ್ಯಕಿರಣಗಳ ಅವಲಂಬನೆ.
- ಯೋಗ ಮತ್ತೆ ಪ್ರಾಣಾಯಾಮ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ.
- ರೋಗನಿರೋಧಕ ಶಕ್ತಿ ಹೆಚ್ಚಿಸಲು ಸ್ವಚ್ಛವಾದ ವಾತಾವರಣದಲ್ಲಿ ವಾಸಿಸುವುದು.
ಕ್ಷಯ ರೋಗ ಬಾರದಂತೆ ಯಾವ ರೀತಿ ತಡೆಯಬಹುದು(How to prevent tuberculosis):
- ನಮ್ಮ ಹತ್ತಿರದ ಆಸ್ಪತ್ರೆಯಲ್ಲಿ BCG ಲಸಿಕೆ ಪಡೆಯುವುದು ಇದು ಕ್ಷಯ ರೋಗ ನಿರ್ಮೂಲನೆಗೆ ರಾಮಬಾಣ.
- ಕೆಮ್ಮುವಾಗ ಬಾಯಿಗೆ ಕೈ ಅಡ್ಡ ಇಟ್ಟು ಕೆಮ್ಮುವುದು.
- ನಮ್ಮ ಸುತ್ತ ಮುತ್ತಲೂ ಸ್ವಚ್ಛತೆ ಕಾಪಾಡುವುದು.
- ನಮ್ಮ ಮನೆಯಲ್ಲಿ ಗಾಳಿ ಬೆಳಕು ಸರಿಯಾಗಿ ಬರುವ ರೀತಿ ನೋಡಿಕೊಳ್ಳುವುದು.
- ಕ್ಷಯ ರೋಗ ಬಂದಿರುವ ವ್ಯಕ್ತಿಯ ಜೊತೆ ಸಂಪರ್ಕ ಕಡಿಮೆ ಮಾಡುವುದು.
ಕ್ಷಯ ರೋಗವು ಗಂಭೀರವಾದ ಆರೋಗ್ಯ ಸಮಸ್ಯೆ ಆದರೂ, ಸಂಪೂರ್ಣವಾಗಿ ಗುಣ ಪಡಿಸಬಹುದಾದ ರೋಗ. ನಾವು ಸರಿಯಾದ ಸಮಯದಲ್ಲಿ ಇದರ ಲಕ್ಷಣಗಳನ್ನು ಗುರ್ತಿಸಿ ನೈಸರ್ಗಿಕ ವಿಧಾನಗಳನ್ನು ಅನುಸರಿಸಿ, ಮತ್ತೆ ವೈದ್ಯರ ನೆರವು ಪಡೆದು ಇದನ್ನು ಗುಣಪಡಿಸಬಹುದಾಗಿದೆ. ಮುಖ್ಯವಾಗಿ ನಾವಿರುವ ಜಾಗ ಸ್ವಚ್ಛವಾಗಿರಬೇಕು, ತಿನ್ನುವ ಆಹಾರ ಪೌಷ್ಠಿಕ ವಾಗಿರಬೇಕು, ನಮ್ಮ ಜೀವನಶೈಲಿ ಉತ್ತಮವಾಗಿದ್ದರೆ, ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.
